History
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪುಟ್ಟ ಊರು ಪದ್ಯಾಣ. ಪ್ರಕೃತಿಯ ರಮ್ಯ ಮಡಿಲಲ್ಲಿರುವ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಬಹು ಪುರಾತನ ಹಾಗೂ ಕಾರಣಿಕ ಕ್ಷೇತ್ರವಾಗಿದೆ. ಪಶ್ಚಿಮಮುಖಿಯಾಗಿ ನೆಲೆಯಾಗಿರುವ ಸಪರಿವಾರ ಶ್ರೀ ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥಿಸಿದರೆ ವಿದ್ಯೆ, ಬುದ್ಧಿ, ಆರೋಗ್ಯ, ಉದ್ಯೋಗ, ವಿವಾಹ, ಸತ್ ಸಂತಾನ ಹಾಗೂ ಕೃಷಿ ಸಮೃದ್ಧಿಗಳನ್ನು ಅನುಗ್ರಹಿಸುತ್ತಾನೆ ಎನ್ನುವುದಕ್ಕೆ ಹಲವಾರು ನಿದರ್ಶನಗಳು ಇವೆ. ಕಲಾಪ್ರಿಯನಾದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವರು ಯಕ್ಷಗಾನ, ಸಂಗೀತ, ಸಾಹಿತ್ಯ, ನೃತ್ಯ ಕಲಾಕ್ಷೇತ್ರಗಳಲ್ಲಿ ಪದ್ಯಾಣದ ಕೀರ್ತಿಯನ್ನು ಬೆಳಗಿಸಿದ್ದಾನೆ. ಶ್ರೀ ಕ್ಷೇತ್ರದಲ್ಲಿ ನಡೆಯುವ ಶ್ರೀ ಚಕ್ರ ಪೂಜೆಯು ಬಹಳ ವೈಶಿಷ್ಟ್ಯಪೂರ್ಣ.
ವಿಟ್ಲದ ಅರಸು ಸೀಮೆಗೆ ಸೇರಿದ ಈ ದೇಗುಲ ಬಹಳ ಕಾಲ ಪಾಳುಬಿದ್ದಿದ್ದು, ಮುಳಿಹುಲ್ಲಿನ ಮಾಡಿನಿಂದ ಕೂಡಿತ್ತು. ಸುಮಾರು ಆರುನೂರು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನವನ್ನು ಪುನರ್ ನಿರ್ಮಾಣಗೊಳಿಸಿ 1975ರಲ್ಲಿ ಅಂದಿನ ಆಡಳಿತ ಮೊಕೇಸರರಾದ ದಿ. ಸೇರಾಜೆ ನಾರಾಯಣ ಭಟ್ಟರ ನೇತೃತ್ವದಲ್ಲಿ ಊರ ಪರವೂರ ಭಕ್ತರ ಸಹಕಾರದೊಂದಿಗೆ ನವೀಕೃತ ದೇವಾಲಯದಲ್ಲಿ ಶ್ರೀಚಕ್ರ ಸಹಿತ ಶ್ರೀಮಹಾಲಿಂಗೇಶ್ವರ ಸ್ವಾಮಿಯ ಪ್ರತಿಷ್ಠೆಯಾಗಿ ಬ್ರಹ್ಮಕಲಶಾಭಿಷೇಕವಾಯಿತು. ದೇವಸ್ಥಾನದಲ್ಲಿ ಮೂರು ಹೊತ್ತು ಪೂಜೆ, ಪರ್ವದಿನಗಳ ಆಚರಣೆ, ವಾರ್ಷಿಕ ರಂಗಪೂಜೆ, ಪ್ರತಿ ಸೋಮವಾರ ಭಜನೆ ಇತ್ಯಾದಿ ಕಾರ್ಯಕ್ರಮಗಳನ್ನು ಊರ-ಪರಪೂರ ಭಕ್ತರ ನೆರವಿನಿಂದ ನಡೆಸಿಕೊಂಡು ಬರಲಾಯಿತು.
2005ನೇ ಇಸವಿಯಲ್ಲಿ ಸೇವಾ ಸಮಿತಿಯನ್ನು ರಚಿಸಿ, ದೈವಜ್ಞರುಗಳ ನಿರ್ದೇಶನ ಹಾಗೂ ಶಿಲ್ಪಿಗಳ ಮಾರ್ಗದರ್ಶನದಂತೆ ಪ್ರಥಮ ಹಂತದಲ್ಲಿ ನಾಗ-ಶಾಸ್ತ್ರಾರ ಪ್ರತಿಷ್ಠೆ, ಧೂಮಾವತಿ ಹಾಗೂ ಕೊರತಿ ದೈವಸ್ಥಾನದ ನವೀಕರಣ, ಬ್ರಹ್ಮಕಲಶಾದಿಗಳನ್ನು ನಡೆಸಿ ದೈವಗಳಿಗೆ ಪ್ರತಿಷ್ಠಾಪನೆ ನಡೆಸಿಕೊಂಡು ಬರಲಾಗುತ್ತಿದೆ.
ತದನಂತರ ದ್ವಿತೀಯ ಹಂತದಲ್ಲಿ ಪೂರ್ವಕಾಲದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಚಕ್ರಕ್ಕೆ ನೂತನ ಗರ್ಭಗೃಹ ನಿರ್ಮಾಣ, ಪಾಕಶಾಲೆ, ಕೊಠಡಿಗಳ ನಿರ್ಮಾಣ, ದೇವಸ್ಥಾನದ ಹೊರಾಂಗಣಕ್ಕೆ ಭಾವಣಿ ಹಾಗೂ ಇತರ ಅಗತ್ಯಪಟ್ಟ ಕೆಲಸಗಳನ್ನು ಪೂರೈಸಿ, ಪೂಜ್ಯ ಯತಿವರ್ಯರುಗಳ ಆಶೀರ್ವಾದ, ಪೂಜ್ಯ ಧರ್ಮಾಸ್ಥಳ ಡಾ. ವೀರೇಂದ್ರ ಹೆಗ್ಗಡೆಯವರ ವಿಶೇಷ ಮಾರ್ಗದರ್ಶನ, ಹಲವು ಕ್ಷೇತ್ರಗಳ ಸಹಾಯಹಸ್ತ, ಊರ-ಪರಪೂರ ದಾನಿಗಳ ನೆರವಿನಿಂದ 2009 ಜನವರಿ 4 ರಿಂದ 11ರವರೆಗೆ ಶ್ರೀ ದೇವರ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವನ್ನು ಬಹು ವಿಜೃಂಭಣೆಯಿಂದ ನಡೆಸಿ, ಉತ್ಸವವನ್ನು ಪ್ರಾರಂಭಿಸಲಾಯಿತು. ಅಲ್ಲದೆ ದೇವಸ್ಥಾನದಲ್ಲಿ ಸೇವೆ, ಶುಭಕಾರ್ಯಗಳನ್ನು ನಡೆಸುವರೆ ಸಂಪೂರ್ಣ ವ್ಯವಸ್ಥೆಯನ್ನು ಕಲ್ಪಿಸಲಾಯಿತು.
ಸಾಂಸ್ಕೃತಿಕ ಹಿನ್ನೆಲೆ
ಈ ಪದ್ಯಾಣದ ಪುಣ್ಯ ನೆಲದಲ್ಲಿ, ಯಕ್ಷಗಾನ ಭಾಗವತಿಕೆಯ ಆಲಾಪನೆ ಇದೆ, ಚಂಡೆ ಮದ್ದಳೆಗಳ ಝೇಂಕಾರವಿದೆ, ಭರತನಾಟ್ಯದ ಲಾಸ್ಯವಿದೆ, ಸಂಗೀತದ ಮಾಧುರ್ಯವಿದೆ, ಗಮಕದ ಸೌರಭವಿದೆ. ಪದ್ಯಾಣದ ಪ್ರತಿ ಮನೆ ಮನೆಗಗಳಲ್ಲಿ ಯಕ್ಷಗಾನ, ಸಂಗೀತ, ಗಮಕ, ಕಲೆ- ಸಾಹಿತ್ಯದ ಕಲಾವಿದರನ್ನು, ಕಲಾಸಕ್ತರನ್ನು ಕಾಣಬಹುದು.
ಕನ್ನಡದ ಗಂಡುಕಲೆ ಯಕ್ಷಗಾನಕ್ಕೆ ಪದ್ಯಾಣ ಮನೆತನದವರ ಕೊಡುಗೆ ಅನುಪಮವಾದುದು. ಪದ್ಯಾಣ ಪುಟ್ಟುನಾರಾಯಣ ಭಾಗವತರು, ಮಾಂಬಾಡಿ ನಾರಾಯಣ ಭಾಗವತರು, ಪದ್ಯಾಣ ಗಣಪತಿ ಭಟ್, ಪದ್ಯಾಣ ನಾರಾಯಣ ಭಟ್ (ಪೆರುವೋಡಿ) ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಪದ್ಯಾಣ ಜಯರಾಮ ಭಟ್, ಪದ್ಯಾಣ ಗೋವಿಂದ ಭಟ್, ಓಟೆಪಡು ವಿಷ್ಣು ಭಟ್, ಚೈತನ್ಯ ಪದ್ಯಾಣ.ಹೀಗೆ ಅನೇಕ ಹಿರಿಕಿರಿಯ ಕಲಾವಿದರು ಯಕ್ಷಗಾನ ಮೇಳಗಳಲ್ಲಿದ್ದು ಯಕ್ಷಗಾನ ಕ್ಷೇತ್ರವನ್ನು ಬೆಳಗಿದ್ದಾರೆ- ಬೆಳಗುತ್ತಿದ್ದಾರೆ.
ವಿದ್ವಾನ್ ಪದ್ಯಾಣ ವೆಂಕಟೇಶ್ವರ ಭಟ್ಟರು ‘ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ’, ‘ಸೌದಾಸ ಚರಿತ್ರೆ’ ಮೊದಲಾದ ಪ್ರಸಿದ್ಧ ಯಕ್ಷಗಾನ ಪ್ರಸಂಗಗಳ ಕರ್ತೃ ಎಂಬುದೂ ಗಮನೀಯ. ಇನ್ನು ಹವ್ಯಾಸಿಯಾಗಿ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಪದ್ಯಾಣದವರು ನೂರಾರು ಜನ. ಪದ್ಯಾಣ ತಿಮ್ಮಣ್ಣ ಭಟ್ಟರು (ಸಂಗೀತವಾಹಿನಿ), ಗಣಪತಿ ಪದ್ಯಾಣ, ಡಾ. ಮಹೇಶ ಪದ್ಯಾಣ ಮೊದಲಾದವರು ಸಂಗೀತ, ಗಮಕ ಕ್ಷೇತ್ರಗಳಲ್ಲಿ ಪ್ರಸಿದ್ದರು. ಹೀಗೆ ಅನೇಕ ಹಿರಿಕಿರಿಯ ಕಲಾವಿದರ ಮೂಲಕ ಪದ್ಯಾಣದ ಹೆಸರು ಎಲ್ಲೆಡೆ ಪಸರಿಸಿದೆ.
ದೇವಾಲಯದಲ್ಲಿ ನಡೆಯುವ ಪ್ರಮುಖ ಪರ್ವಗಳು
- ನಾಗರ ಪಂಚಮಿ: ನಾಗನಿಗೆ ಕ್ಷೀರಾಭಿಷೇಕ ಹಾಗೂ ತಂಬಿಲ
- ಶ್ರೀ ಗಣೇಶ ಚತುರ್ಥಿ : ಬೆಳಗ್ಗೆ ೧೨ ಕಾಯಿ ಗಣಪತಿ ಹೋಮ, ರುದ್ರಾಭಿಷೇಕ, ಪಂಚಾಮೃತಾಭಿಷೇಕ
- ಸಿಂಹ ಮಾಸ ದಲ್ಲಿ ಪ್ರತಿ ಶನಿವಾರ ಬಲಿವಾಡುಕೂಟ ಹಾಗೂ ಮೂರನೇ ಶನಿವಾರ ಸಾರ್ವಜನಿಕ ಶನೈಶ್ಚರಪೂಜೆ
- ನವ ರಾತ್ರಿ: ಬೆಳಗ್ಗೆ ಗಣಪತಿ ಹವನ (ಮೊದಲ ದಿನ), ಪ್ರತೀ ರಾತ್ರಿ ನವ ರಾತ್ರಿಪೂಜೆ ಹಾಗೂ ಭಜನೆ
ಮಹಾನವಮಿ: ರಾತ್ರಿ ವಿಶೇಷ ಪೂಜೆ, ಅನ್ನಸಂತರ್ಪಣೆ - ದೀಪಾವಳಿ : ಧೂಮಾವತಿ ತಂಬಿಲ
- ಕಾರ್ತಿಕ ಮಾಸದಲ್ಲಿ ಕಾರ್ತಿಕ ದೀಪೋತ್ಸವ
- ಉತ್ಥಾನ ದ್ವಾದಶಿಯಂದು ತುಳಸಿ ಪೂಜೆ
- ಮಕರ ಸಂಕ್ರಾಂತಿ : ಸಾರ್ವಜನಿಕ ಸತ್ಯನಾರಾಯಣ ಪೂಜೆ
- ಪೌಷ ಮಾಸ ಶುಕ್ಲ ಪಕ್ಷ ತ್ರಯೋದಶಿಯಂದು ವಾರ್ಷಿಕ ಜಾತ್ರೆ – ಗಣಪತಿ ಹೋಮ, ನವಕಕಲಶಾಭಿಷೇಕ, ನಾಗ ತಂಬಿಲ ಹಾಗೂ ಧೂಮಾವತಿ ತಂಬಿಲ, ರಾತ್ರಿ ಉತ್ಸವ ಬಲಿ ಹಾಗೂ ರಂಗಪೂಜೆ ಚತುರ್ದಶಿಯಂದು ಉತ್ಸವ ಬಲಿ, ಬಟ್ಟಲುಕಾಣಿಕೆ ಹಾಗೂ ರಾಜಾಂಗಣ ಪ್ರಸಾದ, ರಾತ್ರಿ ಧೂಮಾವತಿ ದೈವ, ಕೊರತಿ ದೈವಗಳಿಗೆ ನೇಮ (ಪ್ರತಿವರ್ಷದ ಪಂಚಾಂಗಗಳಿಗೆ ಅನುಗುಣವಾಗಿ ಈ ಪಟ್ಟಿಯನ್ನು ದಿನಾಂಕದೊಂದಿಗೆ ನಮೂದಿಸಲಾಗುತ್ತದೆ.)
- ಮಹಾಶಿವರಾತ್ರಿ : ಬೆಳಗ್ಗೆ ಗಣಪತಿ ಹೋಮ, ರುದ್ರಾಭಿಷೇಕ, ಸಿಯಾಳಾಭಿಷೇಕ, ಬಲಿವಾಡುಕೂಟ ಸಮಾರಾಧನೆ, ರಾತ್ರಿ ಏಕಾದಶ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಶಿವರಾತ್ರಿ ಪೂಜೆ, ಸೂರ್ಯಾಸ್ತದಿಂದ ಮರುದಿನ ಸೂರ್ಯೋದಯದ ವರೆಗೆ ಭಜನಾ ಸೇವೆ
- ವಿಷು: ಬೆಳಗ್ಗೆ ಹಣ್ಣು ಕಾಯಿ ಸಮರ್ಪಣೆ, ಭಜನೆ
- ಪತ್ತನಾಜೆ: ಧೂಮಾವತಿ ತಂಬಿಲ